ಬಾಗಲಕೋಟೆ ಜಿಲ್ಲೆಯ ಬೀಳಗಿ ಮತ್ತು ಮುಧೋಳ ತಾಲೂಕುಗಳ ಅರಣ್ಯ ಪ್ರದೇಶಗಳಲ್ಲಿ ಚಿಂಕಾರಾ ಇರುವಿಕೆಯ ಬಗ್ಗೆ ಕೆಲವು ವರದಿಗಳಿದ್ದವು. ಹಿಂದಿನ ಲಭ್ಯ ದಾಖಲೆಗಳ ಪ್ರಕಾರ ಚಿಂಕಾರವು ಲಭ್ಯವಿರುವ ಪ್ರದೇಶಗಳ ವ್ಯಾಪ್ತಿಯು ಕೃಷ್ಣ ನದಿಯ ಉತ್ತರ ಭಾಗದ ಪ್ರದೇಶಗಳಿಂದ 16ಲಿ  ಉತ್ತರ ಅಕ್ಷಾಂಶದವರೆಗೆ ಕಂಡುಬರುತ್ತಿದ್ದವು. ಇವುಗಳು ಮಲಪ್ರಭಾ ನದಿಯ ಎಡದಂಡೆಯ ಮೇಲೆ ಮಾತ್ರ ಕಂಡು ಬರುತ್ತಿದ್ದು ಮೈನೂರು ರಾಜ್ಯ ಪ್ರದೇಶಗಳಲ್ಲಿ ಕಂಡುಬರುವುದುರ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಕೇವಲ ಕೆಲವೇ ಕೆಲವು ಜನರಿಗೆ ಹಳೆ ಮೈಸೂರು/ ಈಗಿನ ಕರ್ನಾಟಕ ರಾಜ್ಯದಲ್ಲಿ ಚಿಂಕಾರಾದ ಲಭ್ಯತೆಯ ಬಗ್ಗೆ ಮಾಹಿತಿ ಇತ್ತು. ಕಾರಣ ಅವುಗಳ ಸಂಖ್ಯೆ ಕಡಿಮೆಯಿದ್ದು ಈ ಪ್ರಾಣಿಗಳು ತುಂಬಾ ನಾಚಿಕೆ ಸ್ವಭಾವವನ್ನು ಹೊಂದಿವೆ. ನಂತರ 50 ರಿಂದ 60 ರ ದಶಕದಲ್ಲಿ ಎಲ್ಲ ಹಳ್ಳಿ ಜನರಿಗೆ ಇವುಗಳ ಇರುವಿಕೆಯು ತಿಳಿದು ಬಂದಿದ್ದು, ಅವುಗಳು ಅವರುಗಳ ಜೀವನದ ಒಂದು ಭಾಗವಾಗಿದ್ದವು. ಚಿಂಕಾರವು ಅರಣ್ಯ ಪ್ರದೇಶಗಳಲ್ಲದೆ ಅರಣ್ಯ ಗಡಿ ಪ್ರದೇಶದ ರೈತರ ಜಮೀನುಗಳಲ್ಲಿಯೂ ಸಹ ಕಂಡು ಬರುತ್ತಿದ್ದವು ಮತ್ತು ಅವುಗಳು ರೈತರ ಸಾಕು ಪ್ರಾಣಿಗಳೊಂದಿಗೆ ಬೆರೆತು ಹೋಗಿದ್ದವು.
    1970 ರ ನಂತರದಲ್ಲಿ ಚಿಂಕಾರಾ ಎಂಬ ಆಕರ್ಷಿಣೀಯ ಪ್ರಾಣಿಯು ಮುಖ್ಯವಾಗಿ ಅವು ಕಂಡುಬರುತ್ತಿದ್ದ ತುಂಗಭದ್ರಾ ಮತ್ತು ಕೃಷ್ಣಾ ನದಿ ದಂಡೆಗಳ ಉತ್ತರ ಕರ್ನಾಟಕದ ದಕ್ಷಿಣ ಪ್ರಸ್ಥಭೂಮಿ ಪ್ರದೇಶಗಳಾದ ರಾಯಚೂರು, ಕೊಪ್ಪಳ, ಗದಗ, ಕಲಬುರ್ಗಿ, ಯಾದಗಿರಿ ಇತರೆ ಜಿಲ್ಲೆಗಳಲ್ಲಿ ಅವು ಕಣ್ಮರೆಯಾಗಿದ್ದವು. 1980 ಮತ್ತು 1990 ರ ದಶಕಗಳಲ್ಲಿ ನರಿಗಳ ನಿರಂತರವಾದ ಅಧ್ಯಯನದ ಸಮಯದಲ್ಲಿಯೂ ಸಹ ಚಿಂಕಾರಾದ ಇರುವಿಕೆಯ ಬಗ್ಗೆ ಯಾವುದೇ ಕುರುಹುಗಳು ದೊರೆಯಲಿಲ್ಲ. ಆದ್ದರಿಂದ ಚಿಂಕಾರಾದ ಸಂತತಿಯು ನಾಶವಾಗಿದೆ ಎಂದು ಭಾವಿಸಲಾಗಿತ್ತು.
    ಕೇಲವು ವರ್ಷಗಳ ಹಿಂದೆ ಕಾಡುಗಳಲ್ಲಿ ಕುರಿಗಳನ್ನು ಮೇಯಿಸಲು ಹೋದ ಕುರಿಗಾರರಿಗೆ ಚಿಂಕಾರಾದ ಮರಿಗಳು ಕಂಡುಬಂದವು. ಇವುಗಳನ್ನು ಜನರು ಕೃಷ್ಣ ಮೃಗಗಳೆಂದು ತಪ್ಪು ಭಾವಿಸಿದ್ದರು. ಆದರೆ ಬಾಗಲಕೋಟೆ ಜಿಲ್ಲೆಯ ಗೌರವ ವನ್ಯಜೀವಿ ಪರಿಪಾಲಕರಾದ ಶ್ರೀ ಎಂ. ಆರ್. ದೇಸಾಯಿಯವರಿಗೆ ಮರಿಗಳು ಆಕಸ್ಮಿಕವಾಗಿ ಕಂಡುಬಂದು ಅವುಗಳನ್ನು ಧಾರ್ಮಿಕ ಪ್ರದೇಶಗಳಲ್ಲಿ ನಿರ್ವಹಣೆಗಾಗಿ ಕೊಟ್ಟಿದ್ದು, ಅಲ್ಲಿ ಅವುಗಳನ್ನು ಕಂಡಾಗ, ಬೀಳಗಿ ಮತ್ತು ಯಡಹಳ್ಳಿ ಸುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಚಿಂಕಾರಾದ ಇರುವಿಕೆಯ ಬಗ್ಗೆ ಕುರುಹುಗಳು ಸಿಕ್ಕಿದ್ದುದರಿಂದ ಅವುಗಳ ಛಾಯಾಚಿತ್ರಗಳನ್ನು ವನ್ಯಜೀವಿ ತಜ್ಞರಾದ ಶ್ರೀ ಎ. ಜೆ. ಬಿ. ಜಾನಸಿಂಗ್ ರವರಿಗೆ ಕಳುಹಿಸಿಕೊಟ್ಟು ಅವರಿಂದ ಈ ಪ್ರಾಣಿಯು ಚಿಂಕಾರಾ ಎಂದು ದೃಢಪಡಿಸಿಕೊಳ್ಳಲಾಯಿತು.
    ಈ ಒಂದು ಕುರುಹು ಅರಣ್ಯ ಪ್ರದೇಶಗಳಲ್ಲಿ ಕ್ಯಾಮರಾ ಟ್ರ್ಯಾಪ್‍ಗಳನ್ನು ಅಳವಡಿಸಿ, ವ್ಯವಸ್ಥಿತ ರೀತಿಯಲ್ಲಿ ಅವುಗಳ ನಿರಂತರ ಹುಡುಕಾಟದಿಂದ ಚಿಂಕಾರಾದ ಛಾಯಾ ಚಿತ್ರಗಳನ್ನು ಪಡೆಯುವಲ್ಲಿ ಯಶಸ್ಸನ್ನು ತಂದುಕೊಟ್ಟಿತು. ಆಶ್ಚರ್ಯಕರ ಸಂಗತಿ ಏನೆಂದರೆ ಕಾಡಿನಲ್ಲಿ ಅವು ವಿರಳವಾಗಿ ಲಭ್ಯವಿದ್ದರೂ ಉತ್ತಮ ಸಂತತಿಯನ್ನು ಹೊಂದಿದ್ದವು. ಹಿಂದಿನ 30 ವರ್ಷಗಳಲ್ಲಿ ಸಂತತಿಯೂ ನಾಶವಾಗಿದೆ ಎಂದುಕೊಂಡಿದ್ದ ಚಿಂಕಾರಾದ ಪುನರ ಆವಿಷ್ಕಾರವು ವನ್ಯಜೀವಿ ವಿಜ್ಞಾನ ಮತ್ತು ತಂತ್ರಜಾನದ ಸರಿಯಾದ ಬಳಕೆಯ ಫಲಶೃತಿಯಾಗಿದೆ. ಈ ಪುನರ್ ಆವಿಷ್ಕಾರವು ಬೀಳಗಿ ಮತ್ತು ಯಡಹಳ್ಳಿ ಸುತ್ತಲಿನ ಅರಣ್ಯ ಪ್ರದೇಶವನ್ನು ಚಿಂಕಾರಾ ಅಭಯಾರಣ್ಯವೆಂದು ಘೋಷಿಸಲು ಪ್ರಸ್ತಾವನೆಯನ್ನು ಕಳುಹಿಸುವಂತೆ ಎಡೆ ಮಾಡಿಕೊಟ್ಟಿತು.